ಬೆಳಗಾವಿ

ಮನೆ-ಮನಗಳಿಗೆ ತಲುಪಿದ ‘ಮನೆಗೊಂದು ಗ್ರಂಥಾಲಯ*’

8Views

ಬೆಳಗಾವಿಯಲ್ಲಿ ಜಿಲ್ಲಾ ಸಮಿತಿ ರಚನೆ: ಓದು ಸಂಸ್ಕೃತಿ ವಿಸ್ತರಣೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಹೆಜ್ಜೆ

ಬೆಳಗಾವಿ:15,12.2025
ಸಮಾಜದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸಿ, ಜ್ಞಾನ ಮತ್ತು ಪ್ರಜ್ಞೆಯನ್ನು ಹೆಚ್ಚಿಸುವಲ್ಲಿ ಪುಸ್ತಕಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ, ಕನ್ನಡ ಪುಸ್ತಕ ಪ್ರಾಧಿಕಾರವು ‘ಮನೆಗೊಂದು ಗ್ರಂಥಾಲಯ’ ಎಂಬ ವಿಶಿಷ್ಟ ಯೋಜನೆಯ ಮೂಲಕ ಓದುವ ಸಂಸ್ಕೃತಿಯನ್ನು ಪ್ರತಿ ಮನೆಗೂ ತಲುಪಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಜಿಲ್ಲಾ ಸಮಿತಿ ರಚನಾ ಸಭೆಯಲ್ಲಿ ಈ ಕಾರ್ಯಕ್ರಮಕ್ಕೆ ಗಣ್ಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

*ಓದುವ ಹವ್ಯಾಸದ ಪುನಶ್ಚೇತನ*
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ನಾಟಕಕಾರ ಡಾ. ಡಿ.ಎಸ್. ಚೌಗಲೆ, “ಇಂದಿನ ಮೊಬೈಲ್ ಯುಗದಲ್ಲಿ ಕಡಿಮೆಯಾಗುತ್ತಿರುವ ಪುಸ್ತಕ ಓದುವ ಹವ್ಯಾಸದಿಂದ ಜನರು ಹೊರಬಂದು, ಪ್ರಜ್ಞೆ ಬೆಳೆಸಿಕೊಂಡು ಬದುಕನ್ನು ಹಸನುಗೊಳಿಸಲು ಪುಸ್ತಕಗಳನ್ನು ಪ್ರೀತಿಸಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರದ ಪ್ರಯತ್ನ ಶ್ಲಾಘನೀಯ” ಎಂದರು.
ಡಾ. ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವೈ.ಬಿ. ಹಿಮ್ಮಡಿ ಮಾತನಾಡಿ, “ಪುಸ್ತಕಗಳು ಇತಿಹಾಸವನ್ನು ತಿಳಿಸಿ, ಭವಿಷ್ಯಕ್ಕೆ ಸ್ಪಷ್ಟ ಕಲ್ಪನೆ ನೀಡಬಲ್ಲ ಜ್ಞಾನದ ಮೂಲ ಬೇರುಗಳಾಗಿವೆ. ಅಧಿಕೃತ ಮಾಹಿತಿ ಒದಗಿಸುವ ಪುಸ್ತಕಗಳತ್ತ ಯುವಪೀಳಿಗೆ ಸಾಗಲಿ” ಎಂದು ಆಶಿಸಿದರು.
ಮುಖ್ಯಮಂತ್ರಿಗಳ ಮನೆಯಿಂದಲೇ ಚಾಲನೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಯೋಜನೆಯ ಕುರಿತು ವಿವರಿಸಿದರು. “ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಯಿಂದ ಉದ್ಘಾಟನೆಗೊಂಡ ಈ ಯೋಜನೆಯ ಮುಖ್ಯ ಉದ್ದೇಶ ಪುಸ್ತಕ ಓದುವ ಸಂಸ್ಕೃತಿಯನ್ನು ಮನೆ-ಮನಗಳಿಗೆ ಮುಟ್ಟಿಸುವುದು. ಅಡುಗೆ ಮನೆ, ದೇವರ ಮನೆಯಂತೆ ಪ್ರತಿ ಮನೆಯಲ್ಲಿಯೂ ಪುಸ್ತಕಗಳಿಗಾಗಿ ಒಂದು ಸ್ಥಳ ಮೀಸಲಿಟ್ಟು, ಗ್ರಂಥಾಲಯದ ಸ್ವರೂಪ ಕೊಟ್ಟರೆ ಕುಟುಂಬದ ಸದಸ್ಯರಲ್ಲಿ ಓದುವ ಆಸಕ್ತಿ ಮೂಡುತ್ತದೆ” ಎಂದರು.

ಪ್ರಾಧಿಕಾರವು ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಗ್ರಂಥಾಲಯ ಸೃಷ್ಟಿಸುವ ಮಹತ್ತರ ಗುರಿ ಹೊಂದಿದೆ. ಜ್ಞಾನವುಳ್ಳ ಮಹನೀಯರಾದ ಶೇಕ್ಸ್‌ಪಿಯರ್, ಗಾಂಧೀಜಿಯಂತಹ ವ್ಯಕ್ತಿಗಳನ್ನು ಸೃಷ್ಟಿಸಿದ್ದು ಪುಸ್ತಕಗಳ ಓದು. ಭವಿಷ್ಯದಲ್ಲಿ ಮತ್ತಷ್ಟು ಮಹನೀಯರು ಈ ಓದಿನಿಂದ ಹೊರಹೊಮ್ಮಬೇಕು. ದೇವನೂರು ಮಹಾದೇವರ ಆಶಯದಂತೆ ‘ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ’ ಎಂಬ ಸಿದ್ಧಾಂತದೊಂದಿಗೆ ಪ್ರಾಧಿಕಾರ ಮುನ್ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಸಮಿತಿ ರಚನೆ
ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ‘ಮನೆಗೊಂದು ಗ್ರಂಥಾಲಯ, ಬೆಳಗಾವಿ ಜಿಲ್ಲಾ ಜಾಗೃತ ಸಮಿತಿ’ ರಚನೆಯಾಗಿದ್ದು, ಶಂಕರ ಬಾಗೇವಾಡಿ ಜಿಲ್ಲಾ ಸಂಚಾಲಕರಾಗಿ ಹಾಗೂ ಡಾ. ಕವಿತಾ ಕುಸುಗಲ್, ಡಾ. ಶೋಭಾ ನಾಯಕ, ಡಾ. ಪಿ. ನಾಗರಾಜ್ ಸೇರಿದಂತೆ ಒಟ್ಟು 9 ಸದಸ್ಯರು ನೇಮಕಗೊಂಡರು.
ಕಾರ್ಯಕ್ರಮದಲ್ಲಿ ಪ್ರೊ. ದೇಮಣ್ಣ ಸೊಗಲದ ವಂದಿಸಿದರು.

Leave a Reply