ಅರಭಾವಿ ಮತಕ್ಷೇತ್ರದ ಮಠಾಧೀಶರ ವೇದಿಕೆ ಉದ್ಘಾಟನೆ; ದುಶ್ಚಟ, ಮೌಢ್ಯತೆ ನಿವಾರಣೆಗೆ ಶ್ರೀಗಳ ಕರೆ
ಮೂಡಲಗಿ:14.12.2025
ದೇವರು, ತಾಯಿ-ತಂದೆ, ಪೂಜ್ಯರು ಹಾಗೂ ಜನರ ಸತತ ಆಶೀರ್ವಾದದಿಂದಲೇ ನಾವು ಜಿಲ್ಲೆಯಲ್ಲಿ ಗಟ್ಟಿಯಾಗಿ ಜನಸೇವೆ ಮಾಡಲು ಸಾಧ್ಯವಾಗಿದೆ. ಈ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ತಾಲ್ಲೂಕಿನ ಮುನ್ಯಾಳ-ರಂಗಾಪೂರ ಮಠದಲ್ಲಿ ಶನಿವಾರದಂದು ನೂತನವಾಗಿ ಅಸ್ತಿತ್ವಕ್ಕೆ ಬಂದ ‘ಅರಭಾವಿ ಮತಕ್ಷೇತ್ರದ ಮಠಾಧೀಶರ ವೇದಿಕೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜವು ಪ್ರಗತಿ ಸಾಧಿಸಲು ಮಠ-ಮಾನ್ಯಗಳ ಪಾತ್ರ ಅತ್ಯಂತ ನಿರ್ಣಾಯಕ ಎಂದ ಅವರು, ಸಮಾಜ ಪರಿವರ್ತನೆಯಲ್ಲಿ ಮಠಾಧೀಶರು ವಹಿಸುವ ಮಹತ್ವದ ಜವಾಬ್ದಾರಿಯನ್ನು ಶ್ಲಾಘಿಸಿದರು. ಹೊಸದಾಗಿ ರಚನೆಯಾಗಿರುವ ಮಠಾಧೀಶರ ವೇದಿಕೆಗೆ ತಮ್ಮ ಸಂಪೂರ್ಣ ಸಹಕಾರ ಮತ್ತು ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದರು.
*ಹಳ್ಳಿಗಳಲ್ಲಿ ಧಾರ್ಮಿಕ ವಾತಾವರಣ ನಿರ್ಮಿಸಿ*
ಕ್ಷೇತ್ರದ ಪ್ರತಿ ಹಳ್ಳಿ-ಹಳ್ಳಿಗೂ ಮಠಾಧೀಶರು ತೆರಳಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಬೇಕು. ಈ ಮೂಲಕ ದಾರಿ ತಪ್ಪುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರಬೇಕು. ಸಮಾಜದಲ್ಲಿನ ದುಶ್ಚಟಗಳಿಗೆ ಮಟ್ಟ ಹಾಕಿ, ಸುಂದರ ಸಮಾಜ ನಿರ್ಮಾಣಕ್ಕೆ ಮಠಗಳು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಶಾಸಕರು ಸಲಹೆ ನೀಡಿದರು.
ಎಲ್ಲ ಪೂಜ್ಯರು ಒಗ್ಗೂಡಿ ಮಠಾಧೀಶರ ವೇದಿಕೆಯನ್ನು ಸ್ಥಾಪಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇದು ಸಮಾಜಕ್ಕೆ ದೊಡ್ಡ ಮಟ್ಟದ ಮಾರ್ಗದರ್ಶನ ನೀಡಬೇಕು. ಹಿಂದೆ ಗೋಕಾಕದಲ್ಲಿ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಇಂತಹ ವೇದಿಕೆ ನಿರ್ಮಾಣವಾಗಿದ್ದನ್ನು ಸ್ಮರಿಸಿದರು. ಕನ್ಹೇರಿ ಮಠದ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬಂದ ಈ ವೇದಿಕೆಯು ಯಾವುದೇ ಜಾತಿ, ಮತಗಳಿಗೆ ಜೋತು ಬೀಳದೆ ಎಲ್ಲರನ್ನು ಸಮಾನವಾಗಿ ಕಾಣಬೇಕು. ಮೇಲು-ಕೀಳೆಂಬ ಭಾವನೆಗಳನ್ನು ತೆಗೆದುಹಾಕಿ, ಭಕ್ತರ ಕಷ್ಟಗಳನ್ನು ಪರಿಹರಿಸುವ ಶಕ್ತಿ ಶ್ರೀಗಳಿಗಿದೆ ಎಂದು ತಿಳಿಸಿದರು.
*ತಾರತಮ್ಯವಿಲ್ಲದೆ ನೆರವು: ಬಾಲಚಂದ್ರ ಜಾರಕಿಹೊಳಿ*
ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಐತಿಹಾಸಿಕ ಮತ್ತು ಅಸಂಖ್ಯಾತ ಭಕ್ತರನ್ನು ಹೊಂದಿರುವ ಅರಭಾವಿ ದುರದುಂಡೀಶ್ವರ ಮಠ, ಕೋಮು ಸಾಮರಸ್ಯ ಸಾರುವ ಸಾವಳಗಿ ಮಠ, ಶಿವಬೋಧರಂಗ ಮಠ, ಸುಣಧೊಳಿ ಮಠ ಮುಂತಾದ ಮಠಗಳಿವೆ. ಈ ಮಠಗಳು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುತ್ತಿವೆ. ದೊಡ್ಡ ಮತ್ತು ಸಣ್ಣ ಮಠಗಳೆಂದು ಯಾವುದೇ ತಾರತಮ್ಯ ಮಾಡದೆ, ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಶಾಸಕರು ಪ್ರಕಟಿಸಿದರು.
ಕ್ಷೇತ್ರದ ಶಾಂತಿ ಸಂದೇಶವು ಇಡೀ ರಾಜ್ಯಕ್ಕೆ ವಿಸ್ತರಿಸಲು ಪೂಜ್ಯರ ಪಾತ್ರ ಅಷ್ಟೇ ಮುಖ್ಯವಾಗಿದೆ ಎಂದರು.
*ಮೌಢ್ಯತೆ ತೊಲಗಿಸಿ, ಕಸಗೂಡಿಸಲು ಹಿಂಜರಿಯಬೇಡಿ:* ಮುರುಘರಾಜೇಂದ್ರ ಶ್ರೀಗಳು
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, “ಮಠಾಧೀಶರ ವೇದಿಕೆಯು ಸಮಾಜಮುಖಿಯಾಗಿ ಕೆಲಸ ಮಾಡಲಿ. ಸ್ವಾಮಿಗಳು ನಿಜವಾದ ಸಮಾಜ ಸೇವಕರು. ಸಮಾಜದಲ್ಲಿರುವ ಮೂಢ ನಂಬಿಕೆಗಳು ಮತ್ತು ಮೌಢ್ಯತೆಗಳನ್ನು ತೊಲಗಿಸುವ ಕೆಲಸವು ಶ್ರೀಗಳಿಂದಾಗಬೇಕು. ಪ್ರತಿ ಗ್ರಾಮಗಳಿಗೆ ತೆರಳಿ ಗ್ರಾಮಗಳ ನೈರ್ಮಲ್ಯೀಕರಣಕ್ಕೆ ಆದ್ಯತೆ ನೀಡಬೇಕು. ಪ್ರಸಂಗ ಬಂದರೆ ಕಸಗೂಡಿಸಲು ಸಹ ಹಿಂಜರಿಯಬಾರದು. ಕೊಪ್ಪಳ ಗವಿ ಸಿದ್ಧೇಶ್ವರ ಮಹಾಸ್ವಾಮಿಗಳ ಮಾದರಿಯಲ್ಲಿ ಸಮಾಜ ಸೇವೆ ಮಾಡಬೇಕು ಹಾಗೂ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಉತ್ತಮ ಶಿಕ್ಷಣ, ಸಂಸ್ಕಾರ, ಆಚಾರ-ವಿಚಾರಗಳನ್ನು ನೀಡಬೇಕು” ಎಂದು ಕರೆ ನೀಡಿದರು.
ವೇದಿಕೆಯ ಅಧ್ಯಕ್ಷ ಹಾಗೂ ಮುನ್ಯಾಳ-ರಂಗಾಪೂರ ಮಠದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಠ-ಮಂದಿರಗಳಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು. ಹುಣಶ್ಯಾಳ ಪಿ.ಜಿ ಕೈವಲ್ಯಾಶ್ರಮದ ನಿಜಗುಣ ದೇವರು ವೇದಿಕೆಯ ಸದುದ್ದೇಶಗಳನ್ನು ವಿವರಿಸಿ, ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಹೊಸ ಯರಗುದ್ರಿಯ ಸಿದ್ಧಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು, ಮನ್ನಿಕೇರಿಯ ವಿಜಯಸಿದ್ದೇಶ್ವರ ಮಹಾಸ್ವಾಮಿಗಳು, ನಾಗನೂರಿನ ಡಾ. ಕಾವ್ಯಶ್ರೀ ಅಮ್ಮನವರು ಸೇರಿದಂತೆ ಅರಭಾವಿ ಕ್ಷೇತ್ರದ ಅನೇಕ ಮಠಾಧೀಶರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಪೂಜ್ಯರು ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಪುಷ್ಪಗಳಾರ್ಪಣೆ ಮಾಡಿ ಗೌರವಿಸಿದರು.





