ಬೆಳಗಾವಿ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಒತ್ತಾಯ: ಆಟೋ ಚಾಲಕರಿಂದ ಬೃಹತ್ ಮೆರವಣಿಗೆ, ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

9Views

ಕಂದಾಯ ಸಚಿವ ಕೃಷ್ಣಾ ಭೈರೇಗೌಡ ವಿರುದ್ಧ ಚಿಕ್ಕೋಡಿ ಹೋರಾಟಗಾರರಿಂದ ಆಕ್ರೋಶ; ಶಾಸಕರಿಗೆ ಅವಮಾನ ಆರೋಪ
ಚಿಕ್ಕೋಡಿ:10.12.2025
ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ರಚನೆಯ ಬೇಡಿಕೆಗೆ ಸರ್ಕಾರ ಸ್ಪಂದಿಸದಿರುವ ಹಿನ್ನೆಲೆಯಲ್ಲಿ, ಇಲ್ಲಿನ ಹೋರಾಟ ತೀವ್ರಗೊಂಡಿದೆ. ಚಿಕ್ಕೋಡಿ ಆಟೋ ಮಾಲೀಕರು ಮತ್ತು ಚಾಲಕರ ಸಮೃದ್ಧಿ ಸಂಘದ ಪದಾಧಿಕಾರಿಗಳು ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದು, ಇಂದು ಡಿಸೆಂಬರ್ 11, 2025, ಗುರುವಾರದಂದು ನೂರಾರು ಆಟೋಗಳ ಬೃಹತ್ ಮೆರವಣಿಗೆ ಹಾಗೂ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಉದಯ ಠಗರೆ, ಪ್ರತ್ಯೇಕ ಜಿಲ್ಲೆಯ ರಚನೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಆಟೋ ಚಾಲಕ ಸಮುದಾಯ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದು ಘೋಷಿಸಿದರು.
*ಮೂರು ದಶಕಗಳ ಹೋರಾಟಕ್ಕೆ ಮೋಸ: ವಕೀಲರ ಆಕ್ರೋಶ*

ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ಎಸ್. ಆರ್. ಧನವಂತ ಅವರು, “ಕಳೆದ ಮೂರು ದಶಕಗಳಿಂದ ನಾವು ಹೋರಾಟ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ವಿಶಾಲವಾದ ಜಿಲ್ಲೆಯಿಂದಾಗಿ ಈ ಭಾಗ ಅಭಿವೃದ್ಧಿಯಿಂದ ವಂಚಿತವಾಗಿದೆ. ಇದು ಇಲ್ಲಿನ ಜನರಿಗೆ ಮಾಡುತ್ತಿರುವ ಮೋಸ. ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೇ ಚಿಕ್ಕೋಡಿ ಜಿಲ್ಲೆ ಘೋಷಣೆಯಾಗಬೇಕು. ಇಲ್ಲವಾದಲ್ಲಿ, ನಮ್ಮ ಹೋರಾಟದ ಸ್ವರೂಪ ಉಗ್ರವಾಗಲಿದೆ” ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.

*ಕಂದಾಯ ಸಚಿವರಿಗೆ ಸವಾಲೆಸೆದ ಸಮಾಜ ಸೇವಕರು*

ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ ಅವರು ಕಂದಾಯ ಸಚಿವ ಕೃಷ್ಣಾ ಭೈರೇಗೌಡ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಚಿಕ್ಕೋಡಿ ಜಿಲ್ಲೆ ಪರವಾಗಿ ಧ್ವನಿ ಎತ್ತಿದ ಸ್ಥಳೀಯ ಶಾಸಕರಾದ ದೂರ್ಯೋಧನ ಐಹೋಳೆ, ಸೌ. ಶಶಿಕಲಾ ಜೊಲ್ಲೆ, ಬಾಲಚಂದ್ರ ಜಾರಕಿಹೋಳಿ ಮತ್ತು ರಾಜು ಕಾಗೆ ಅವರಿಗೆ ಸಚಿವರು ‘ಹಾರಿಕೆಯ ಉತ್ತರದ ಪತ್ರ’ ನೀಡುವ ಮೂಲಕ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
“ಸಚಿವರೇ, ತಾವು ಕೇವಲ ದಕ್ಷಿಣ ಕರ್ನಾಟಕಕ್ಕೆ ಸೀಮಿತರಾಗಬೇಡಿ. ಒಮ್ಮೆ ಚಿಕ್ಕೋಡಿ ಭಾಗಕ್ಕೆ ಬಂದು ಕಾಗವಾಡ, ಅಥಣಿ, ಹಾರೂಗೇರಿ, ರಾಯಬಾಗದಂತಹ ಸ್ಥಳಗಳಲ್ಲಿ ವಾಸ್ತವ್ಯ ಮಾಡಿ. ಇಲ್ಲಿನ ಜನರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳಿ. ಈ ಭಾಗದ ಬಗ್ಗೆ ಯಾವುದೇ ಅಧ್ಯಯನ ನಡೆಸದೆ ನಿರ್ಣಯ ತೆಗೆದುಕೊಳ್ಳುವುದು ನಮ್ಮ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ,” ಎಂದು ಸಚಿವರಿಗೆ ಸವಾಲೆಸೆದರು.

*ಶಾಲಾ ಮಕ್ಕಳಿಂದಲೂ ಬೃಹತ್ ರ್ಯಾಲಿ: ಮನವಿ ಸಲ್ಲಿಕೆ*
ಚಿಕ್ಕೋಡಿ ಪಟ್ಟಣದಲ್ಲಿ ಪ್ರತ್ಯೇಕ ಜಿಲ್ಲೆಯ ಪರವಾಗಿ ವಿದ್ಯಾರ್ಥಿಗಳೂ ಬೀದಿಗಿಳಿದರು. ಪ್ರೋ. ಎಸ್. ವೈ. ಹಂಜಿ, ಸುರೇಶ ಬ್ಯಾಕೋಡೆ, ರುದ್ರಾಪ್ಪ ಸಂಗಪ್ಪಗೊಳ ಮತ್ತು ನಾಗೇಶ ಮಾಳಿ ಅವರ ನೇತೃತ್ವದಲ್ಲಿ ಶಾಲಾ ಮಕ್ಕಳ ಬೃಹತ್ ರ್ಯಾಲಿ ನಡೆಯಿತು. ನಂತರ ಉಪ ವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಈ ಹೋರಾಟದ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ, ಪ್ರತಾಪಗೌಡ ಪಾಟೀಲ, ಅನಿಲ ನಾವಿ, ರಫೀಕ್ ದಡ್ಡಿ, ಮೋಹನ್ ಸುತಾರ್, ಇಲಿಯಾಸ್ ಮುಲ್ಲಾ, ಅಶೋಕ್ ಖೋತ, ಶಿವಾಜಿ ಖಾಡೆ, ಸಾದೀಕ್ ಸನದಿ, ಮಲಕಾರಿ ಬಣ್ಣೆ, ದುರದುಂಡಿ ಬಡಿಗೇರ, ಮೋಹನ ಪಾಟೀಲ, ಶಂಕರ ಅವಡಖಾನ, ಖಾನಪ್ಪಾ ಬಾಡ, ನಿಂಗಪ್ಪಾ ವಡಗೋಲ, ಶಿವಲಿಂಗ ವಗ್ಗೆ, ರಫೀಕ ಪಠಾಣ, ಅಮೂಲ ನಾವಿ, ಅಜೀತ್ ವಗ್ಗೆ, ಭೀಮರಾವ್ ಮಡ್ಡೆ, ಸಂಜು ಬೇವಿನಗಿಡ, ಸುರೇಶ ಖದ್ದಿ ಸೇರಿ ನೂರಾರು ಹೋರಾಟಗಾರರು ಉಪಸ್ಥಿತರಿದ್ದರು.

Leave a Reply