ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ, ಮತ್ತು ನೀರಾವರಿ ಯೋಜನೆಗಳ ಶೀಘ್ರ ಜಾರಿಗಾಗಿ ರೈತರ ಪ್ರತಿಭಟನೆ
ಬೆಳಗಾವಿ:11.12.2025
ಕರ್ನಾಟಕದ ರೈತ ಸಮುದಾಯವು ರಾಜ್ಯ ಕೃಷಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ, ಬೆಲೆ ಕುಸಿತ, ಸಾಲಬಾಧೆ ಮತ್ತು ನೀರಾವರಿ ಯೋಜನೆಗಳ ವಿಳಂಬ ಕುರಿತು ತಮ್ಮ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
*ಬೆಲೆ ಕುಸಿತ ಮತ್ತು ಆರ್ಥಿಕ ನೆರವು*
ಭತ್ತ, ಹತ್ತಿ, ತೊಗರಿ, ಮೆಣಸಿನಕಾಯಿ, ಮತ್ತು ಶೇಂಗಾ ಸೇರಿದಂತೆ ಪ್ರಮುಖ ಬೆಳೆಗಳ ಮಾರುಕಟ್ಟೆ ಬೆಲೆಯು ಕಳೆದ ವರ್ಷಕ್ಕಿಂತ ಕ್ವಿಂಟಾಲ್‌ಗೆ ರೂ. 1,000 ರಿಂದ 3,000 ವರೆಗೆ ಇಳಿಕೆಯಾಗಿದೆ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.
*ಪ್ರಮುಖ ಬೇಡಿಕೆಗಳು:*
* ಕನಿಷ್ಠ ಬೆಂಬಲ ಬೆಲೆ: ಜೊತೆಗೆ ಪ್ರತಿ ಕ್ವಿಂಟಾಲ್‌ಗೆ ರೂ. 1,000 ಪ್ರೋತ್ಸಾಹಧನ ಸೇರಿಸಿ, ಸರ್ಕಾರ ತಕ್ಷಣ ಉತ್ಪನ್ನಗಳನ್ನು ಖರೀದಿಸಬೇಕು ಮತ್ತು ಒಂದು ವಾರದೊಳಗೆ ಹಣ ಪಾವತಿಸಬೇಕು.
* ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ದಾವೆಗಳಿಂದ ತೊಂದರೆಗೊಳಗಾದ ರೈತರ ಸಂಪೂರ್ಣ ಸಾಲವನ್ನು ತಕ್ಷಣ ಮನ್ನಾ ಮಾಡಬೇಕು.
* ಅಕಾಲಿಕ ಮಳೆ ಮತ್ತು ಚಂಡಮಾರುತದಿಂದ ನಷ್ಟವಾದ ಭತ್ತ, ಹತ್ತಿ, ಜೋಳ, ರಾಗಿ, ಹಣ್ಣು, ತರಕಾರಿ ಮತ್ತು ಹೂವಿನ ಬೆಳೆಗಳಿಗೆ ಸೂಕ್ತ ಪರಿಹಾರ ಧನ ನೀಡಬೇಕು.
* ಎ.ಪಿ.ಎಂ.ಸಿ.ಗಳಲ್ಲಿ ರೈತರಿಂದ ಅನಧಿಕೃತವಾಗಿ ಹಮಾಲಿ, ಕಮಿಷನ್, ಮತ್ತು ಇತರ ಶುಲ್ಕಗಳ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
* ಬೆಳೆ ವಿಮಾ ಯೋಜನೆಯಡಿಯಲ್ಲಿ ಪರಿಹಾರ ಪಾವತಿಸದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು.
*ನೀರಾವರಿ ಮತ್ತು ಭೂಸ್ವಾಧೀನ ವಿವಾದ*
ಸಮಗ್ರ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಮಿತಿ ಆಗ್ರಹಿಸಿದೆ.
* ಮೇಕೆದಾಟು ಮತ್ತು ಕಳಸಾ ಬಂಡೂರಿ ಯೋಜನೆಗಳನ್ನು ಅತಿ ಜರೂರಾಗಿ ಜಾರಿಗೊಳಿಸಬೇಕು.
* ನಿಧಾನಗತಿಯಲ್ಲಿ ಸಾಗುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ವೇಗಗೊಳಿಸಬೇಕು.
* ರೈತರ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ಕಂಬ ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿ ವಿದ್ಯುತ್ ಪೂರೈಕೆ ಮಾಡಬೇಕು.
* ಚನ್ನರಾಯಪಟ್ಟಣದಲ್ಲಿ ಕೆ.ಎ.ಐ.ಡಿ.ಬಿ. ವತಿಯಿಂದ ನಡೆಯುತ್ತಿರುವ ಭೂಸ್ವಾಧೀನವನ್ನು ವಿರೋಧಿಸಿ 1,000 ದಿನಗಳಿಂದ ಧರಣಿ ನಡೆಸುತ್ತಿರುವ ರೈತರಿಗೆ ನ್ಯಾಯ ಒದಗಿಸಿ, ಭೂಸ್ವಾಧೀನವನ್ನು ರದ್ದುಪಡಿಸಬೇಕು.
ಸಮಿತಿಯ ವಕ್ತಾರರು, ಸರ್ಕಾರವು ತಕ್ಷಣವೇ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.





