ಬೆಳಗಾವಿ

ಸುವರ್ಣ ಸೌಧದ ಮುಂದೆ ನಿಲ್ಲಲಿ 108 ಅಡಿ ಎತ್ತರದ ತಾಯಿ ಭುವನೇಶ್ವರಿಯ ಕಂಚಿನ ಪ್ರತಿಮೆ!*

17Views

ಕನ್ನಡಪರ ಸಂಘಟನೆಗಳಿಂದ ಸರ್ಕಾರಕ್ಕೆ ಬಲವಾದ ಆಗ್ರಹ; ಗಡುವು ಮೀರಿದರೆ ಹೋರಾಟದ ಎಚ್ಚರಿಕೆ
ಬೆಳಗಾವಿ:5, 12,2025
ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂದೆ ನಾಡು-ನುಡಿಯ ಪ್ರತೀಕವಾದ ಕರ್ನಾಟಕ ಮಾತೆ ಶ್ರೀ ಭುವನೇಶ್ವರಿ ದೇವಿಯ ೧೦೮ ಅಡಿಗಿಂತಲೂ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಸರ್ವೋದಯ ಸ್ವಯಂ ಸೇವಾ ಸಂಘ ಹಾಗೂ ಬೆಳಗಾವಿ ಕನ್ನಡಪರ ಸಂಘಟಣೆಗಳ ಒಕ್ಕೂಟವು ರಾಜ್ಯ ಸರ್ಕಾರಕ್ಕೆ ಬಲವಾದ ಆಗ್ರಹ ಮಂಡಿಸಿದೆ. ಈ ಕುರಿತು ಸಂಘಟನೆಗಳ ಅಧ್ಯಕ್ಷರಾದ ಶ್ರೀನಿವಾಸ ಯ. ತಾಳೂಕರ ಅವರು ಮುಖ್ಯಮಂತ್ರಿಗಳಿಗೆ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿದ್ದಾರೆ.
*ಹೆಮ್ಮೆ ಹೆಚ್ಚಿಸಿದ ಬೆಂಗಳೂರಿನ ನಿರ್ಧಾರಕ್ಕೆ ಸ್ವಾಗತ*
ಕಳೆದ ವರ್ಷ (ಡಿ: ೧೧-೧೨-೨೦೨೩) ಬೆಂಗಳೂರು ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ಸ್ಥಾಪಿಸಲು ಸಲ್ಲಿಸಿದ್ದ ಮನವಿಗೆ ಸರ್ಕಾರ ಸ್ಪಂದಿಸಿ, ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಪ್ರತಿಮೆ ಸ್ಥಾಪಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
*ಸುವರ್ಣ ಸೌಧದ ಪಕ್ಕದಲ್ಲಿ ಭುವನೇಶ್ವರಿಗೆ ಶಾಶ್ವತ ಸ್ಥಾನ*
ಈಗಾಗಲೇ ಬೆಳಗಾವಿಯ ಸುವರ್ಣ ಸೌಧದ ಆವರಣದಲ್ಲಿ ಬಾಬಾ ಸಾಹೇಬ ಅಂಬೇಡ್ಕರ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಮಹಾತ್ಮಾ ಗಾಂಧೀಜಿಯವರ ಮಹಾನ್ ಪ್ರತಿಮೆಗಳು ಕಂಗೊಳಿಸುತ್ತಿವೆ. ಇದೇ ಸಾಲಿಗೆ ಸಮಸ್ತ ಕನ್ನಡಿಗರ ಆರಾಧ್ಯ ದೈವವಾದ ಕರ್ನಾಟಕ ಮಾತೆಯ ಮೂರ್ತಿಯನ್ನು ಸೇರಿಸುವಂತೆ ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.

ಒಕ್ಕೂಟದ ಪ್ರಮುಖ ಬೇಡಿಕೆಗಳು:
* ಸುವರ್ಣ ಸೌಧವು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದು, ನೂರಾರು ಕಿಲೋಮೀಟರ್ ದೂರದಿಂದಲೂ ಗೋಚರಿಸುವ ಸುಂದರ ತಾಣವಾಗಿದೆ.
* ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಈ ಮಾರ್ಗವಾಗಿ ಸಂಚರಿಸುವುದರಿಂದ, ಸೌಧದ ಪ್ರವೇಶ ದ್ವಾರದ ಪಕ್ಕದಲ್ಲಿ ಪ್ರತಿಮೆ ಸ್ಥಾಪನೆ ಸೂಕ್ತ.
* ಇತ್ತೀಚೆಗೆ ರಾಷ್ಟ್ರದ ಗಮನ ಸೆಳೆಯುತ್ತಿರುವ ಬೆಂಗಳೂರಿನ ಕೆಂಪೇಗೌಡರ ಪ್ರತಿಮೆ, ವಿಜಯಪುರದ ಬಸವೇಶ್ವರ ಪ್ರತಿಮೆ, ಶ್ರೀರಾಮ ಹಾಗೂ ಸರ್ದಾರ ವಲ್ಲಭಾಯಿ ಪಟೇಲ್ ಅವರ ಪ್ರತಿಮೆಗಳ ಮಾದರಿಯಲ್ಲೇ ಬೃಹತ್ ಪ್ರತಿಮೆ ನಿರ್ಮಿಸಬೇಕು.
*ಕನ್ನಡಪರ ಸಂಘಟನೆಗಳಿಂದ ಕಠೋರ ಎಚ್ಚರಿಕೆ*
ಕನ್ನಡಪರ ಒಕ್ಕೂಟವು ತಮ್ಮ ಬೇಡಿಕೆಯ ಕುರಿತು ಸರ್ಕಾರಕ್ಕೆ ಸ್ಪಷ್ಟವಾದ ಗಡುವನ್ನು ನೀಡಿದೆ. ಭುವನೇಶ್ವರಿ ದೇವಿಯ ಪ್ರತಿಮೆ ಸ್ಥಾಪಿಸಲು ಬೆಳಗಾವಿ ಅಧಿವೇಶನದ ಸಮಯದಲ್ಲಿಯೇ ಭೂಮಿ ಪೂಜೆ ನೆರವೇರಿಸಬೇಕು ಮತ್ತು 108 ಅಡಿಗಿಂತಲೂ ಎತ್ತರದ ಪ್ರತಿಮೆ ಸ್ಥಾಪನೆಯ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಲಾಗಿದೆ.

ಒಂದು ವೇಳೆ ಸರ್ಕಾರ ಈ ಕುರಿತು ವಿಳಂಬ ಧೋರಣೆ ಅನುಸರಿಸಿದರೆ, ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗೂಡಿ ನಾವೇ ಪ್ರತಿಮೆಗೆ ಗುದ್ದಲಿ ಪೂಜೆ ನೆರವೇರಿಸುತ್ತೇವೆ. ಅಲ್ಲದೆ, ನಾಡಿನಾದ್ಯಂತ ದೇಣಿಗೆ ಸಂಗ್ರಹಿಸಿ 108 ಅಡಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ಸ್ಥಾಪಿಸುವ ಹೋರಾಟವನ್ನು ರೂಪಿಸುತ್ತೇವೆ,” ಎಂದು ಮನವಿಯಲ್ಲಿ ಕಠೋರ ಎಚ್ಚರಿಕೆ ನೀಡಲಾಗಿದೆ.

ವಿಧಾನಮಂಡಲ ಅಧಿವೇಶನದ ಪೂರ್ವದಲ್ಲಿ ಸರ್ಕಾರ ತನ್ನ ನಿರ್ಣಯವನ್ನು ಪ್ರಕಟಿಸದಿದ್ದರೆ ಹೋರಾಟ ಮುಂದುವರೆಯುವುದು ನಿಶ್ಚಿತ. ನಾಡಿನ ಸ್ವಾಭಿಮಾನಕ್ಕೆ ಸಂಬಂಧಿಸಿದ ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವನ್ನು ಒಕ್ಕೂಟ ವ್ಯಕ್ತಪಡಿಸಿದೆ.

Leave a Reply