ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾಯಜ್ಞ ಮತ್ತು ಪಲ್ಲಕ್ಕಿ ಮೆರವಣಿಗೆ; ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
ಬೆಳಗಾವಿ: 5.12.2025
ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾದ ಲಕ್ಷಾಂತರ ಭಕ್ತರ ಆರಾಧ್ಯ ದೇವತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಮಹಾ ಜಾತ್ರೆಯ ಅಂಗವಾಗಿ ಗುರುವಾರ ಸವದತ್ತಿಯ ಪುಣ್ಯಕ್ಷೇತ್ರದಲ್ಲಿ ಕಂಕಣ ಮಂಗಳಸೂತ್ರ ವಿಸರ್ಜನಾ ಸಮಾರಂಭವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಗಂಟಾನಾದ ಮತ್ತು ಭಂಡಾರದ ಜಯಘೋಷಗಳ ನಡುವೆ ನಡೆದ ಭವ್ಯ ಮೆರವಣಿಗೆಯೊಂದಿಗೆ ಮಹಾಯಜ್ಞ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.
*ಕಂಕಣ, ಮಂಗಳಸೂತ್ರ ವಿಸರ್ಜನೆ ವಿಧಿವಿಧಾನ
ಬುಧವಾರ ರಾತ್ರಿ ಉತ್ಸವ ಮೂರ್ತಿಯೊಂದಿಗೆ ವಿಜೃಂಭಣೆಯ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯು ಮೌನೇಶ್ವರ ದೇವಸ್ಥಾನದ ಬಳಿಗೆ ತಲುಪಿದಾಗ, ‘ಉಘೇ ಉಘೇ ಆಯಿ ಉಘೇ’ ಎಂಬ ಉದ್ಘೋಷಗಳೊಂದಿಗೆ ಮಂಗಳಕರವಾದ ಕಂಕಣ ವಿಸರ್ಜನೆಯ ವಿಧಿಯನ್ನು ನೆರವೇರಿಸಲಾಯಿತು.
ಯಲ್ಲಮ್ಮ ದೇವಿಯ ಮೂಲ ನಿವಾಸವೆಂದು ನಂಬಲಾಗಿರುವ ಹರಳಕಟ್ಟಿಯಿಂದ ಭಕ್ತರು ಹಸಿರು ಸೀರೆ, ಕಣ ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ತಂದು, ಶಾಸ್ತ್ರೋಕ್ತವಾಗಿ ದೇವಿಗೆ ಕಂಕಣ ಧಾರಣೆ ಮಾಡಿದರು. ಈ ಸಂದರ್ಭದಲ್ಲಿ ಡೋಲು ಮತ್ತು ನಗಾರಿಗಳ ಸದ್ದು ಹಾಗೂ ಭಂಡಾರದ ಜಯಘೋಷಗಳು ಮುಗಿಲು ಮುಟ್ಟಿದ್ದವು.
ಗುರುವಾರ ಬೆಳಿಗ್ಗೆ, ದೇವಾಲಯದ ಆವರಣದಲ್ಲಿ ಧಾರ್ಮಿಕ ರೀತಿಯಲ್ಲಿ ಹೋಮ-ಹವನ ಕಾರ್ಯಕ್ರಮವನ್ನು ನಡೆಸಲಾಯಿತು.
*ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿ*
ಈ ಧಾರ್ಮಿಕ ಸಮಾರಂಭದಲ್ಲಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಶೋಕ್ ದುಡಗುoಟಿ, ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗಣವರ್, ಉಪ ಕಾರ್ಯನಿರ್ವಾಹಕ ನಿರ್ದೇಶಕಿ ನಾಗರತ್ನ ಚೋಳಿನ್, ಸಿಪಿಐ ಸುರೇಶ್ ಬಿ., ಅಲ್ಲಮಪ್ರಭು ಪ್ರಭುನವರ್ ಹಾಗೂ ಅರ್ಚಕ ಯಡುರಪ್ಪ ಮುಂತಾದವರು ಉಪಸ್ಥಿತರಿದ್ದರು.
*ಗುಡ್ಡದ ಮೇಲೆ ನೂರಾರು ಬಸ್‌ಗಳಿಂದ ಸಂಚಾರ ಅಸ್ತವ್ಯಸ್ತ*
ಕಳೆದ ನಾಲ್ಕು ದಿನಗಳಿಂದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ನಾಲ್ಕು ನೂರಕ್ಕೂ ಹೆಚ್ಚು ರಾಜ್ಯ ಸಾರಿಗೆ ಬಸ್‌ಗಳು ಯಲ್ಲಮ್ಮನ ಗುಡ್ಡದ ಮೇಲೆ ಕಂಡ ಕಂಡಲ್ಲಿ ನಿಂತಿದ್ದರಿಂದ ತೀವ್ರ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಉಗರಗೋಳ್ ಜೋಗುಳಭಾವಿ ಮತ್ತು ಸವದತ್ತಿ ಮಾರ್ಗಗಳಲ್ಲಿ ಭಾರಿ ವಾಹನ ದಟ್ಟಣೆ ಉಂಟಾಯಿತು. ಅದರಲ್ಲೂ ವಿಶೇಷವಾಗಿ, ಉಗರಗೋಳ್-ಸವದತ್ತಿ ಮಾರ್ಗದಲ್ಲಿ ರಸ್ತೆಯ ಬದಿಗಳಲ್ಲಿ ರಾಜ್ಯ ಸಾರಿಗೆ ಬಸ್‌ಗಳು ನಿಂತಿದ್ದರಿಂದ ಈ ಮಾರ್ಗದಲ್ಲಿ ವಾಹನ ದಟ್ಟಣೆ ಮತ್ತಷ್ಟು ಬಿಗಡಾಯಿಸಿತು.
ಪೊಲೀಸರ ಮಧ್ಯಸ್ಥಿಕೆ
ಸಂಚಾರ ದಟ್ಟಣೆಯ ನಡುವೆ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರತ ಪೊಲೀಸರು ಮತ್ತು ವಾಹನ ಚಾಲಕರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿಗಳು ನಡೆದವು. ಅಂತಿಮವಾಗಿ, ಸಿಪಿಐ ಸುರೇಶ್ ಬಿ. ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಸಂಚಾರವನ್ನು ಸುಗಮಗೊಳಿಸಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.





