ಬೆಳಗಾವಿ: 22.11.25
ಉತ್ತರ ಕರ್ನಾಟಕ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಜೋರಾಗಿದ್ದು, ಕಾಂಗ್ರೆಸ್ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆಯವರ ಆಗ್ರಹಕ್ಕೆ ಸುಮಾರು 20 ಶಾಸಕರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ. ಈ ಭಾಗದ ಎಲ್ಲ ಶಾಸಕರು ಹೋರಾಟಕ್ಕೆ ಕೈಜೋಡಿಸಬೇಕೆಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ಮೂಲಕ ಮನವಿ ಮಾಡಿದೆ.
*ತಾರತಮ್ಯವೇ ಪ್ರತ್ಯೇಕತೆಗೆ ಕಾರಣ:*
ಕರ್ನಾಟಕ ಏಕೀಕರಣವಾದಾಗಿನಿಂದಲೂ ಉತ್ತರ ಕರ್ನಾಟಕಕ್ಕೆ ಎಲ್ಲ ಕ್ಷೇತ್ರಗಳಲ್ಲೂ ತಾರತಮ್ಯ, ಅನ್ಯಾಯ ಮತ್ತು ಮಲತಾಯಿ ಧೋರಣೆ ಮುಂದುವರೆದಿದೆ. ರಾಜಕೀಯದಲ್ಲಿ ಸಮಾನ ಅವಕಾಶದ ಕೊರತೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಪ್ರಮುಖ ಸಚಿವರು ಹಾಗೂ ಪಕ್ಷಾಧ್ಯಕ್ಷ ಸ್ಥಾನಗಳು ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿರುವುದು, ಹಾಗೂ ಇತ್ತೀಚಿನ ರಾಜ್ಯೋತ್ಸವ ಪ್ರಶಸ್ತಿಯಲ್ಲೂ ತಾರತಮ್ಯವಾಗಿರುವುದು ಬೇಸರ ತಂದಿದೆ ಎಂದು ಸಮಿತಿ ಹೇಳಿದೆ.
*15 ಜಿಲ್ಲೆಗಳ ಸೇರ್ಪಡೆಗೆ ಆಗ್ರಹ:*
ಐಟಿ, ಬಹುರಾಷ್ಟ್ರೀಯ ಕಂಪನಿಗಳು, ನೀರಾವರಿ ಯೋಜನೆಗಳು ಮತ್ತು ಉದ್ಯೋಗಾವಕಾಶಗಳಿಗಾಗಿ ಪ್ರತ್ಯೇಕ ರಾಜ್ಯ ಅನಿವಾರ್ಯವಾಗಿದೆ. ಶಾಸಕ ರಾಜು ಕಾಗೆಯವರು, ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ಭಾಗಗಳನ್ನು ಒಗ್ಗೂಡಿಸಿ ಬೀದರ್, ಕಲಬುರ್ಗಿ, ಬೆಳಗಾವಿ, ಧಾರವಾಡ, ಬಳ್ಳಾರಿ ಸೇರಿ ಒಟ್ಟು 15 ಜಿಲ್ಲೆಗಳ ಪ್ರತ್ಯೇಕ ರಾಜ್ಯ ರಚನೆಗೆ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
*ಹೋರಾಟದ ಮುಂದಿನ ಹಾದಿ:*
2018ರಿಂದ ಸಮಿತಿ ಪ್ರಾರಂಭಿಸಿದ ಸಹಿ ಸಂಗ್ರಹ ಅಭಿಯಾನದಲ್ಲಿ ಈಗಾಗಲೇ 1.40 ಕೋಟಿಗೂ ಹೆಚ್ಚು ಸಹಿ ಸಂಗ್ರಹಿಸಲಾಗಿದೆ. ಪ್ರತ್ಯೇಕ ಮೈಸೂರು ರಾಜ್ಯದ ಆಗ್ರಹಕ್ಕೂ ಸಮಿತಿ ಸ್ವಾಗತ ವ್ಯಕ್ತಪಡಿಸಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ‘ಚಿಕ್ಕ ರಾಜ್ಯ ಸುಲಭ ಆಡಳಿತ’ ಪರಿಕಲ್ಪನೆಯಂತೆ ಪ್ರತ್ಯೇಕ ರಾಜ್ಯ ರಚನೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು.
ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕಬ್ಬು ಬೆಳೆಗಾರರು, ಯುವಕರಿಗೆ ನೇಮಕಾತಿ ಮತ್ತು ನನೆಗುದಿಗೆ ಬಿದ್ದಿರುವ ಯೋಜನೆಗಳ ಕುರಿತು ಸಮರ್ಪಕ ಚರ್ಚೆ ನಡೆಸಿ, ಅನವಶ್ಯಕ ವಿಷಯಗಳಿಗೆ ಅವಕಾಶ ನೀಡದೆ ಅಧಿವೇಶನವನ್ನು ಸಾರ್ಥಕಗೊಳಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಅಡವೇಶ ಇಟಗಿ, ವೈ.ಬಿ. ಪಾಟೀಲ (ಬಾಗಲಕೋಟೆ), ಅಶೋಕ ದೇಶಪಾಂಡೆ, ಮಹಾಂತೇಶ ಶೆಲ್ಲಿಕೇರಿ ಮತ್ತಿತರರು ಉಪಸ್ಥಿತರಿದ್ದರು.





