ಬೆಳಗಾವಿ

ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ: ನಿವಾಸಿಗಳಿಂದ ತೀವ್ರ ವಿರೋಧ, ಉಗ್ರ ಹೋರಾಟದ ಎಚ್ಚರಿಕೆ*

16Views

ಬೆಳಗಾವಿ: 27.11.2025
ಜಿಲ್ಲೆಯ ಐತಿಹಾಸಿಕ ಪಟ್ಟಣವಾದ ಚನ್ನಮ್ಮನ ಕಿತ್ತೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯ 17ನೇ ವಾರ್ಡಿನಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ಪಟ್ಟಣ ಪಂಚಾಯತಿ (ಪಿ.ಪಿ.) ಅಧ್ಯಕ್ಷ ಜಯಸಿದ್ದರಾಮ ಮಾರಿಹಾಳ ಹಾಗೂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
*ಅಪಘಾತಗಳು ಹೆಚ್ಚಳ, ಜನರ ಸಂಚಾರಕ್ಕೆ ತೊಂದರೆ*
ಪಟ್ಟಣದ 17ನೇ ವಾರ್ಡ್, ಹೊಸಾ ಚನ್ನಾಪುರ ಮತ್ತು ಗಿರಿಯಾಲ ಗ್ರಾಮಗಳ ನಿವಾಸಿಗಳು ಈ ಮದ್ಯದಂಗಡಿ ತೆರೆಯುವುದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ತುಂಬಗೇರಿ ಕೆರೆಯ ಸಮೀಪ, ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಪಕ್ಕದಲ್ಲಿ ಹಾಗೂ ಹೊಸಾ ಚನ್ನಾಪೂರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗೆ ಹೊಂದಿಕೊಂಡಂತೆ ಅಂಗಡಿ ತೆರೆಯಲು ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಜನವಸತಿ ಪ್ರದೇಶವಾಗಿರುವ ಈ ಸ್ಥಳವು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಸೇರಿದಂತೆ ಸಾರ್ವಜನಿಕರು ನಿತ್ಯ ಓಡಾಡುವ ಮಾರ್ಗವಾಗಿದೆ. ಈ ರಸ್ತೆಯು ಇಕ್ಕಟ್ಟಾಗಿದ್ದು, ಹಿಂದೆ ಇಲ್ಲಿ ನಡೆದ ಅಪಘಾತಗಳಲ್ಲಿ ಹಲವರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಈಗ ಮದ್ಯದಂಗಡಿ ತೆರೆದರೆ ಅಪಘಾತಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ ಎಂದು ನಿವಾಸಿಗಳು ಮನವಿಯಲ್ಲಿ ವಿವರಿಸಿದ್ದಾರೆ.

*ಉಗ್ರ ಹೋರಾಟದ ಎಚ್ಚರಿಕೆ*
ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿ ಮದ್ಯದಂಗಡಿ ತೆರೆಯಲು ನೀಡಲಾದ ಅನುಮತಿಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಈ ಹಿಂದೆ ಸೋಮವಾರ ಪೇಟೆಯಲ್ಲಿ ಇದೇ ರೀತಿಯ ಸಮಸ್ಯೆಯಿಂದಾಗಿ ಮದ್ಯದಂಗಡಿಯನ್ನು ಮುಚ್ಚಿಸಲಾಗಿತ್ತು. ಅದೇ ರೀತಿ ಈಗಲೂ ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದಕ್ಕೆ ನಿವಾಸಿಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಸಾರ್ವಜನಿಕರ ವಿರೋಧವನ್ನು ಮೀರಿ ಮದ್ಯದಂಗಡಿಗೆ ಪರವಾನಗಿ ನೀಡಿದರೆ, ಸೋಮವಾರ ಪೇಟೆಯಲ್ಲಿ ನಡೆಸಿದ ಮಾದರಿಯಲ್ಲೇ ಈ ಪ್ರದೇಶದ ನಿವಾಸಿಗಳೆಲ್ಲರೂ ಸೇರಿ ಧರಣಿ ನಡೆಸಿ ಅಂಗಡಿ ಮುಚ್ಚಿಸುವವರೆಗೆ ಉಗ್ರ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರು, “ಎಂ.ಎಸ್.ಐ.ಎಲ್ ಮದ್ಯದಂಗಡಿ ತೆರೆಯಲು ಈಗಾಗಲೇ ನಿರಾಕ್ಷೇಪಣಾ ಪತ್ರ (NOC) ನೀಡಲಾಗಿದೆ. ಈ ಕುರಿತು ಅಬಕಾರಿ ಇಲಾಖೆಯವರು ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು,” ಎಂದು ತಿಳಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕಿರಣ ವಾಲಿಕಾರ, ಕೆಂಚ್ಚಪ್ಪ ಗುಡಾಕಾರ, ಮಹೇಶ ಭಂಡಾರಿ, ಬಾಬು ಹುಲಮನಿ, ನಾಜೀಲ್ ಬೆಳವಡಿ, ಅಡವಯ್ಯ ಹಿರೇಮಠ, ದೀಪಕ ಪೈ, ಈರಣ್ಣ ವಕ್ಕುಂದ, ಶೋಭಾ ದರ್ಶಿ, ಶಿಲ್ಪಾ ಪೈ, ಪಾರ್ವತಿ ಬಡಿಗೇರ, ಹೆಮಲತಾ ಶೆಟ್ಟಿ, ವಾಸು ನಾಯ್ಕ, ಚಂದ್ರಯ್ಯ ಹಿರೇಮಠ, ದುರ್ಗಪ್ಪ ದೇವಗಿರಿ, ರಮೇಶ ಕಲ್ಲವಡ್ಡರ, ನಬೀ ಅತ್ತಾರ, ಸಲಿಂ ಬೆಳವಡಿ ಸೇರಿದಂತೆ ಹಲವು ನಿವಾಸಿಗಳು ಉಪಸ್ಥಿತರಿದ್ದರು.

Leave a Reply