ಮೃತಪಟ್ಟ ಎಂಟು ದಿನಗಳಲ್ಲೇ ಕುಟುಂಬಕ್ಕೆ ಕರಾಳ ಶಾಕ್: ಬದುಕಿಗೆ ದಾರಿ ತೋರುವಂತೆ ಜಿಲ್ಲಾಡಳಿತಕ್ಕೆ ರೈತ ಸಂಘದ ಮನವಿ
ಬೆಳಗಾವಿ:24.11.2025
ಸಾಲ ಮರುಪಾವತಿಗಾಗಿ ಸಹಕಾರಿ ಸೊಸೈಟಿಯವರು ನೀಡಿದ ಅತಿಯಾದ ಕಿರುಕುಳ ಮತ್ತು ಒತ್ತಡಕ್ಕೆ ನೊಂದು ಬೆಳಗಾವಿ ತಾಲೂಕಿನ ರೈತರೊಬ್ಬರು ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ದುರಂತವೆಂದರೆ, ರೈತ ಆತ್ಮಹತ್ಯೆ ಮಾಡಿಕೊಂಡ ಕೇವಲ ಎಂಟು ದಿನಗಳ ಒಳಗೇಯೇ ಸೊಸೈಟಿಯವರು ಆ ಮೃತ ರೈತನ ಮನೆಯ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಇದರಿಂದ ಆಧಾರ ಕಳೆದುಕೊಂಡ ಕುಟುಂಬವು ಈಗ ಬೀದಿಗೆ ಬೀಳುವ ಭೀತಿಯಲ್ಲಿದೆ.
ಈ ಅಮಾನವೀಯ ಬೆಳವಣಿಗೆಯಿಂದ ತೀವ್ರ ಆಘಾತಕ್ಕೆ ಒಳಗಾಗಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೆಳಗಾವಿ ತಾಲೂಕಾ ಘಟಕವು, ಕೂಡಲೇ ಮಧ್ಯಪ್ರವೇಶಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಗಂಭೀರ ಮನವಿ ಸಲ್ಲಿಸಿದೆ.
*ಕರುಳನ್ನು ಹಿಂಡುವ ಮನವಿ:*
‘ಮಾನ್ಯರೇ, ಬದುಕಲು ದಾರಿ ತೋರಿಸಿ’
ರೈತ ಸಂಘ ಸಲ್ಲಿಸಿರುವ ಮನವಿಯಲ್ಲಿ, “ಸೊಸೈಟಿಯವರ ಅತಿಯಾದ ಕಿರುಕುಳದಿಂದ ರೈತ ನೇಣಿಗೆ ಶರಣು. ನೇಣಿಗೆ ಶರಣಾದ ಎಂಟು ದಿನಗಳ ಒಳಗೇಯೇ ಸದರಿ ರೈತನ ಮನೆಯ ಹರಾಜು ಪ್ರಕ್ರಿಯೆ ಆರಂಭಗೊಂಡಿದೆ. ಇದರಿಂದಾಗಿ ಮೃತ ರೈತನ ಕುಟುಂಬದ ಉಳಿದುಕೊಳ್ಳುವ ಎಲ್ಲ ಬಾಗಿಲುಗಳು ಮುಚ್ಚಿ ಹೋಗಿವೆ” ಎಂದು ನೋವು ವ್ಯಕ್ತಪಡಿಸಲಾಗಿದೆ.
*ತಂದೆಯೇ ಕುಟುಂಬದ ಆಧಾರಸ್ತಂಭ*
ನಿಧನದಿಂದಾಗಿ ಈಗಾಗಲೇ ಕಷ್ಟದಲ್ಲಿರುವ ಕುಟುಂಬದ ಏಕೈಕ ಆಸರೆಯಾದ ಮನೆಯನ್ನೂ ಕಸಿದುಕೊಳ್ಳಲು ಹೊರಟಿರುವ ಈ ನಡೆಯು ತೀವ್ರ ಖಂಡನೀಯ. ‘ಮಾನ್ಯರೇ, ದಯವಿಟ್ಟು ಬದುಕಲು ದಾರಿ ತೋರಿಸಿ’ ಎಂದು ಸಂತ್ರಸ್ತ ಕುಟುಂಬದ ಪರವಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.
*ಜಿಲ್ಲಾಡಳಿತದ ತುರ್ತು ಮಧ್ಯಪ್ರವೇಶಕ್ಕೆ ಆಗ್ರಹ*
ಸದ್ಯಕ್ಕೆ ಈ ಮೃತ ರೈತನ ಕುಟುಂಬವು ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಅವರಿಗೆ ಯಾವುದೇ ಆಸರೆ ಇಲ್ಲದಂತಾಗಿದೆ. ಹೀಗಾಗಿ, ಜಿಲ್ಲಾಡಳಿತವು ಮಾನವೀಯ ನೆಲೆಯಲ್ಲಿ ಕೂಡಲೇ ಮಧ್ಯಪ್ರವೇಶಿಸಿ, ಹರಾಜು ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ, ಸಾಂತ್ವನ ಹಾಗೂ ಜೀವನ ನಿರ್ವಹಣೆಗೆ ಒಂದು ದಾರಿಯನ್ನು ತೋರಿಸಬೇಕು ಎಂದು ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಸಾಲ ವಸೂಲಾತಿಯ ಸಂದರ್ಭದಲ್ಲಿ ಮಾನವೀಯತೆಯನ್ನು ಮರೆತು ವರ್ತಿಸುತ್ತಿರುವ ಸೊಸೈಟಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು ಎಂಬುದು ರೈತ ಸಮುದಾಯದ ಆಗ್ರಹವಾಗಿದೆ.





