ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ
ಬೆಳಗಾವಿ: 9.12.2025
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು, ಮಂಗಳವಾರ ಬೆಳಗಾವಿಯ ಮಾಲಿನಿ ಸಿಟಿ ಬಳಿ ಬೃಹತ್ ರೈತ ಸಮಾವೇಶವನ್ನು ನಡೆಸಿದರು. ಸಮಾವೇಶದ ನಂತರ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನಕ್ಕೆ ಮುಂದಾದ ನೂರಾರು ಬಿಜೆಪಿ ಪ್ರಮುಖ ನಾಯಕರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ವಶಕ್ಕೆ ಪಡೆಯುವ ಮೂಲಕ ಮುತ್ತಿಗೆ ಯತ್ನವನ್ನು ವಿಫಲಗೊಳಿಸಿದರು.
*ಸುವರ್ಣ ಸೌಧಕ್ಕೆ ‘ಕಮಲ’ ನಾಯಕರ ಮುತ್ತಿಗೆ ಯತ್ನ ವಿಫಲ*
ಸಮಾವೇಶ ಮುಗಿದ ಬಳಿಕ ಮಾಲಿನಿ ಸಿಟಿಯಿಂದ ಹೆದ್ದಾರಿ ಮೂಲಕ ಸುವರ್ಣ ಸೌಧದತ್ತ ತೆರಳಲು ಹೊರಟ ಕಮಲ ನಾಯಕರನ್ನು, ಹೆದ್ದಾರಿ ತಲುಪುವ ಮೊದಲೇ ಸರ್ವಿಸ್ ರಸ್ತೆಯ ಮೇಲೆಯೇ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆಯುವ ಪೊಲೀಸರ ಪ್ರಯತ್ನ ಮತ್ತು ಬಿಜೆಪಿ ನಾಯಕರ ನಡುವೆ ಕೆಲಕಾಲ ತೀವ್ರ ವಾಗ್ವಾದ ಹಾಗೂ ಹೈಡ್ರಾಮಾ ಸೃಷ್ಟಿಯಾಯಿತು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕುನುಗ್ಗಲು ಉಂಟಾಗಿದ್ದು, ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು.
<span;><span;>* *ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ: ಬೆಳೆ ಪರಿಹಾರಕ್ಕೆ ಆಗ್ರಹ*
<span;><span;>*
ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ನಾವು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರೈತರ ಪರವಾಗಿ ಪ್ರತಿಭಟನೆ ನಡೆಸಿದ್ದೇವೆ. ಇಂದು ದಾವಣಗೆರೆಯಲ್ಲಿ ಹೋರಾಟಕ್ಕೆ ಚಾಲನೆ ನೀಡಿದ್ದ ನಾನು, ಇಲ್ಲಿ ಮುತ್ತಿಗೆ ಹಾಕಲು ಬಂದಿದ್ದೇವೆ” ಎಂದು ತಿಳಿಸಿದರು.
ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ರಾಜ್ಯ ಸರ್ಕಾರವು ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿದ ಅವರು, “ಬೆಳೆ ಪರಿಹಾರವನ್ನು ತಕ್ಷಣ ರೈತರಿಗೆ ನೀಡಬೇಕು. ಇದು ಲಜ್ಜೆಗೆಟ್ಟ ದರಿದ್ರ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ” ಎಂದು ಕಿಡಿಕಾರಿದರು.
ಕಬ್ಬು ಬೆಳೆಗೆ ಎಫ್‌ಆರ್‌ಪಿ ದರ ನಿಗದಿ ಮಾಡಿದ್ದರೂ, ಅದಕ್ಕಿಂತ ಹೆಚ್ಚಿನ ದರ ನೀಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದೆ. “ಕಬ್ಬು ಬೆಳೆಗಾರರಿಗೆ ಹೆಚ್ಚು ದರ ಕೊಡಲು ನಿಮಗೆ ಏನು ಕಷ್ಟ?” ಎಂದು ಪ್ರಶ್ನಿಸಿದರು. ಅಲ್ಲದೆ, “ಈ ಹಿಂದೆ ಯಡಿಯೂರಪ್ಪ ಅವರು ರೈತರು ಸಂಕಷ್ಟದಲ್ಲಿದ್ದಾಗ ಅವರೊಂದಿಗೆ ಇರುತ್ತಿದ್ದರು. ಅದೇ ರೀತಿ ನಾನು ಹಾಗೂ ನಮ್ಮ ಪಕ್ಷವು ಯಾವಾಗಲೂ ರೈತರ ಜೊತೆ ಇರುತ್ತೇವೆ” ಎಂದು ರೈತರಿಗೆ ಭರವಸೆ ನೀಡಿದರು.
ಮೆಕ್ಕೆಜೋಳ ಸೇರಿದಂತೆ ಯಾವುದೇ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸದಿರುವುದು ರೈತ ವಿರೋಧಿ ನೀತಿಯಾಗಿದ್ದು, “ಇಂತಹ ಸರ್ಕಾರಕ್ಕೆ ಉಳಿಗಾಲವಿಲ್ಲ” ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು.
*ಪ್ರಮುಖ ನಾಯಕರ ವಶಕ್ಕೆ*
ಪೊಲೀಸರು ಅಂತಿಮವಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಆರ್. ಅಶೋಕ, ಶಾಸಕರಾದ ಚಲುವಾದಿ, ರವಿಕುಮಾರ್, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ ಸೇರಿ ಸುಮಾರು 50ಕ್ಕೂ ಹೆಚ್ಚು ಪ್ರಮುಖ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ರೈತ ವಿರೋಧಿ ನೀತಿಗಳ ವಿರುದ್ಧ ಬಿಜೆಪಿಯ ಈ ಪ್ರತಿಭಟನೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.





