ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಸಜ್ಜು: 20 ಸಾವಿರಕ್ಕೂ ಹೆಚ್ಚು ರೈತರೊಂದಿಗೆ ಶಕ್ತಿ ಪ್ರದರ್ಶನ
ಬೆಳಗಾವಿ: 8,12, 2025
ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಚಳಿಗಾಲದ ಅಧಿವೇಶನದ ಮೊದಲ ದಿನವೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷವಾದ ಬಿಜೆಪಿ ಸಜ್ಜಾಗಿದೆ. ರಾಜ್ಯ ಸರ್ಕಾರದ ‘ರೈತ ವಿರೋಧಿ ನೀತಿ’ಗಳನ್ನು ಖಂಡಿಸಿ, ಸದನದ ಒಳ ಮತ್ತು ಹೊರಗೂ ಹೋರಾಟದ ಕಿಚ್ಚು ಹಚ್ಚಲು ವಿಪಕ್ಷಗಳು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಇಂದು (ಮಂಗಳವಾರ) ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.
*ಪ್ರತಿಭಟನಾ ಸಿದ್ಧತೆಗಳ ಪರಿಶೀಲನೆ:*
ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ್, ಹಾಗೂ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಹಿರಿಯ ನಾಯಕರು ಸೋಮವಾರವೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ವೇದಿಕೆ ಹಾಗೂ ಸಿದ್ಧತೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.
*ರೈತರ ಅಳಲಿಗೆ ಕಿವುಡಾದ ಸರ್ಕಾರ: ಬಿ.ವೈ. ವಿಜಯೇಂದ್ರ ಆಕ್ರೋಶ*
ಪ್ರತಿಭಟನಾ ಸ್ಥಳ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
*ರೈತರಿಗೆ ಅನ್ಯಾಯ:*
“ರಾಜ್ಯ ಕಾಂಗ್ರೆಸ್ ಸರ್ಕಾರವು ಕಬ್ಬು ಬೆಳೆಗಾರರು, ಮೆಕ್ಕೆಜೋಳ, ಭತ್ತ ಮತ್ತು ತೊಗರಿ ಬೆಳೆಗಾರರು ಸೇರಿದಂತೆ ಎಲ್ಲ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ರೈತರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಮಂಗಳವಾರ 20 ಸಾವಿರಕ್ಕೂ ಹೆಚ್ಚು ರೈತರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ” ಎಂದು ಘೋಷಿಸಿದರು.
*ಸುವರ್ಣಸೌಧಕ್ಕೆ ಮುತ್ತಿಗೆ:* ಪ್ರತಿಭಟನೆಯ ಬಳಿಕ ನೇರವಾಗಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
*ಪರಿಹಾರ ವಿಳಂಬ:*
“ಕಣ್ಣಿದ್ದು ಕಾಣದಂತೆ, ಕಿವಿ ಇದ್ದು ಕಿವುಡರಂತೆ ಸರ್ಕಾರ ವರ್ತಿಸುತ್ತಿದೆ. ಬೆಳೆ ಹಾನಿ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಾರೆ. ಆದರೆ, ಮುಖ್ಯಮಂತ್ರಿಗಳು ರಾಜ್ಯದ ಖಜಾನೆಗೆ ಬರುತ್ತಿರುವ ದುಡ್ಡು ಎಲ್ಲಿ ಹೋಗುತ್ತಿದೆ ಎಂಬುದಕ್ಕೆ ಉತ್ತರಿಸಬೇಕು” ಎಂದು ಪ್ರಶ್ನಿಸಿದರು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬಿಜೆಪಿ ಸದನದ ಹೊರಗೆ ಮತ್ತು ಒಳಗೆ ಪ್ರಬಲ ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದರು.
*ರೈತರ ಆತ್ಮಹತ್ಯೆಗೆ ರಾಜ್ಯದಲ್ಲೇ 2ನೇ ಸ್ಥಾನ: ಆರ್. ಅಶೋಕ್ ಕಳವಳ*
ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಮಾತನಾಡಿ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ದೇಶದಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ.
*ಖಜಾನೆ ಖಾಲಿ, ಕಾಂಗ್ರೆಸ್ ಜಾಲಿ:*
“ಸುಮಾರು 2400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಖಜಾನೆ ಖಾಲಿ ಖಾಲಿಯಾಗಿದೆ, ಆದರೆ ಕಾಂಗ್ರೆಸ್ನವರು ಜಾಲಿ ಜಾಲಿಯಾಗಿದ್ದಾರೆ” ಎಂದು ಅವರು ವ್ಯಂಗ್ಯವಾಡಿದರು.
*ಅಧಿಕಾರದ ಮದ:* “ಕಾಂಗ್ರೆಸ್ನವರಿಗೆ ಅಧಿಕಾರದ ಮದ ಏರಿದೆ. ಅವರಿವರ ಕಾಲು ಎಳೆದುಕೊಂಡು ನಡೆಯುತ್ತಿದ್ದಾರೆ. ನಮಗೆ ಅಧಿಕಾರ ಬೇಡ, ರೈತರ ಪರವಾಗಿ ನಿಲ್ಲಿ, ಇಲ್ಲ ಜಾಗ ಬಿಟ್ಟು ಕೊಡಿ ಎಂದು ನಾವು ಹೋರಾಟ ಮಾಡುತ್ತಿದ್ದೇವೆ” ಎಂದರು.
*ಸದನದಲ್ಲಿ ಎಚ್ಚರಿಕೆ:* ಪ್ರವಾಹ ಪರಿಹಾರದ ಬಗ್ಗೆ ಚರ್ಚಿಸಲು ಬೆಳಿಗ್ಗೆ ನಿಲುವಳಿ ಸೂಚನೆ ಕೊಟ್ಟಿದ್ದೇವೆ. ಕಾಂಗ್ರೆಸ್ ಸರ್ಕಾರವು ನಮ್ಮ ಒತ್ತಾಯದ ಮೇರೆಗೆ ಸದನದಲ್ಲಿ ಪ್ರವಾಹ ಪರಿಹಾರದ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು. ಇಲ್ಲದಿದ್ದರೆ, ಸದನದಲ್ಲಿಯೂ ಹೋರಾಟ ಮಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ರೈತರ ಸಮಸ್ಯೆಗಳೇ ಈ ಚಳಿಗಾಲದ ಅಧಿವೇಶನದ ಪ್ರಮುಖ ಅಸ್ತ್ರವಾಗಿದ್ದು, ಪ್ರತಿಪಕ್ಷಗಳ ಹೋರಾಟಕ್ಕೆ ಆಡಳಿತ ಪಕ್ಷವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.





