ಬೆಳಗಾವಿ

ಬೆಳಗಾವಿ ಮೃಗಾಲಯದಲ್ಲಿ ಸಾಮೂಹಿಕ ಕೃಷ್ಣಮೃಗಗಳ ಸಾವು: 28 ಜಿಂಕೆ ಬಲಿ; ತನಿಖೆಗೆ ಸಚಿವ ಖಂಡ್ರೆ ಆದೇಶ*

20Views

ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ; ಬ್ಯಾಕ್ಟೀರಿಯಾ ಸೋಂಕಿನ ಶಂಕೆ
ಬೆಳಗಾವಿ:15.11.2025
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಆಘಾತಕಾರಿ ಘಟನೆ ಸಂಭವಿಸಿದ್ದು, ಕೇವಲ ಎರಡೇ ದಿನಗಳಲ್ಲಿ ಒಟ್ಟು 28 ಕೃಷ್ಣಮೃಗಗಳು (ಕಪ್ಪು ಜಿಂಕೆಗಳು) ಸಾವನ್ನಪ್ಪಿವೆ.
ನವೆಂಬರ್ 13ರಂದು 8 ಕೃಷ್ಣಮೃಗಗಳು ಮೃತಪಟ್ಟಿದ್ದವು. ಆದರೆ ಆ ಆತಂಕಕಾರಿ ಬೆಳವಣಿಗೆಯ ಬೆನ್ನಲ್ಲೇ, ಶನಿವಾರ ಬೆಳಗ್ಗೆ ಮತ್ತೆ 20 ಕೃಷ್ಣಮೃಗಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಸಾಮೂಹಿಕ ಸಾವಿಗೆ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
*ಕೇವಲ 10 ಜಿಂಕೆಗಳು ಉಳಿದಿವೆ*
ಈ ಘಟನೆ ನಡೆದಾಗ ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳಿದ್ದವು. ದುರಂತದಲ್ಲಿ 28 ಜಿಂಕೆಗಳು ಮೃತಪಟ್ಟಿದ್ದು, ಪ್ರಸ್ತುತ ಕೇವಲ 10 ಕೃಷ್ಣಮೃಗಗಳು ಮಾತ್ರ ಉಳಿದಿವೆ. ಎಸಿಎಫ್ ನಾಗರಾಜ ಬಾಳೇಹೊಸೂರ, ಮೃಗಾಲಯ ಸಂರಕ್ಷಣಾಧಿಕಾರಿ ಪವನ್ ಕುರನಿಂಗ ಹಾಗೂ ಆರೋಗ್ಯ ಅಧಿಕಾರಿಗಳು ಸ್ಥಳದಲ್ಲಿದ್ದು, ಉಳಿದ ಪ್ರಾಣಿಗಳ ಆರೋಗ್ಯ ತಪಾಸಣೆಯಲ್ಲಿ ನಿರತರಾಗಿದ್ದಾರೆ.
*ಬ್ಯಾಕ್ಟೀರಿಯಾ ಸೋಂಕಿನಿಂದ ಸಾವು: ಡಿಎಫ್ಓ ಸ್ಪಷ್ಟನೆ*
ಈ ಬಗ್ಗೆ 360 ಪ್ರತಿನಿಧಿ ಡಿಎಫ್ಓ ಎನ್.ಇ.ಕ್ರಾಂತಿ ಅವರನ್ನು ಸಂಪರ್ಕಿಸಿದಾಗ, “ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣಮೃಗಗಳು ಬ್ಯಾಕ್ಟೀರಿಯಾ ಸೋಂಕಿನಿಂದ ಮೃತಪಟ್ಟಿರುವುದು ತಿಳಿದುಬಂದಿದೆ. ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯದ ಪಶು ವಿಜ್ಞಾನ ಸಂಸ್ಥೆಯ ತಜ್ಞ ವೈದ್ಯರು ಸ್ಥಳಕ್ಕೆ ಆಗಮಿಸುತ್ತಿದ್ದು, ಅವರು ಪರೀಕ್ಷೆ ನಡೆಸಲಿದ್ದಾರೆ” ಎಂದು ತಿಳಿಸಿದರು.

ಎಸಿಎಫ್ ನಾಗರಾಜ ಬಾಳೇಹೊಸೂರ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮೃತಪಟ್ಟ 28 ಕೃಷ್ಣಮೃಗಗಳಲ್ಲಿ 25ರ ಮರಣೋತ್ತರ ಪರೀಕ್ಷೆ ನಡೆಸಿ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಉಳಿದ 3 ಮೃತದೇಹಗಳನ್ನು ಬನ್ನೇರುಘಟ್ಟದಿಂದ ಬರುವ ತಜ್ಞರ ಪರೀಕ್ಷೆಗಾಗಿ ಶೇಖರಿಸಿ ಇಡಲಾಗಿದೆ. “ಇನ್ನುಳಿದ 10 ಕೃಷ್ಣಮೃಗಗಳು ಆರೋಗ್ಯವಾಗಿ ಮತ್ತು ಕ್ರಿಯಾಶೀಲವಾಗಿವೆ. ಮೊನ್ನೆ ಮೃತಪಟ್ಟಿದ್ದ ಜಿಂಕೆಗಳ ವರದಿಗಾಗಿ ಕಾಯಲಾಗುತ್ತಿದ್ದು, ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ಸ್ಪಷ್ಟವಾಗಲಿದೆ. ಉಳಿದ ಪ್ರಾಣಿಗಳ ಆರೋಗ್ಯ ತಪಾಸಣೆಯನ್ನೂ ಮುನ್ನೆಚ್ಚರಿಕೆ ಕ್ರಮವಾಗಿ ನಡೆಸಲಾಗುತ್ತಿದೆ” ಎಂದು ಅವರು ಹೇಳಿದರು.
*ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ*
ಘಟನೆಯ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕೂಡಲೇ ತನಿಖೆಗೆ ಆದೇಶ ನೀಡಿದ್ದಾರೆ.
ಸಾಂಕ್ರಾಮಿಕ ಕಾಯಿಲೆಯಿಂದ ಜಿಂಕೆಗಳು ಮೃತಪಟ್ಟಿರುವ ಶಂಕೆ ಹಿನ್ನೆಲೆಯಲ್ಲಿ, ಮೃಗಾಲಯದ ಬೇರೆ ಯಾವುದೇ ಪ್ರಾಣಿಗೆ ಸೋಂಕು ತಗುಲದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

*ತಜ್ಞರ ಸಮಿತಿ ರಚನೆ:*
ಕಲುಷಿತ ನೀರು, ಆಹಾರ ಸೇವಿಸಿ ಜಿಂಕೆಗಳು ಮೃತಪಟ್ಟಿವೆಯೇ? ಅಥವಾ ಬೆಕ್ಕು ಇತ್ಯಾದಿ ಸಾಕುಪ್ರಾಣಿಗಳಿಂದ ಈ ರೋಗ ಹರಡಿದೆಯೇ? ಎಂಬ ಬಗ್ಗೆ ತಜ್ಞರ ಸಮಿತಿಯೊಂದನ್ನು ರಚಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ತಿಳಿಸಿದ್ದಾರೆ.
ಅಲ್ಲದೆ, “ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಈ ಸಾಮೂಹಿಕ ಸಾವು ಮೃಗಾಲಯದ ನಿರ್ವಹಣೆ ಮತ್ತು ಆರೋಗ್ಯ ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸುತ್ತಿದ್ದು, ತಜ್ಞರ ವರದಿ ಮತ್ತು ತನಿಖೆಯ ನಂತರ ಸತ್ಯಾಂಶ ಬಯಲಾಗಬೇಕಿದೆ

Leave a Reply