ಈ ವರ್ಷದ ಆರಂಭದಲ್ಲಿ ಮುಂಬೈ ತಂಡವನ್ನು ತೊರೆಲು ನಿರ್ಧರಿಸಿ, ಎನ್‌ಒಸಿ ಪಡೆದಿದ್ದ ಯಶಸ್ವಿ ಜೈಸ್ವಾಲ್ ಇದೀಗ ಮುಂಬೈ ಕ್ರಿಕೆಟ್ ತಂಡದಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ. ಮೊದಲು ಗೋವಾ ತಂಡಕ್ಕೆ ಸೇರಲು ನಿರ್ಧರಿಸಿದ್ದ ಅವರು, ರೋಹಿತ್ ಶರ್ಮಾ ಅವರ ಮನವಿಯನ್ನು ಒಪ್ಪಿಕೊಂಡು ಮುಂಬೈನಲ್ಲಿಯೇ ಆಡಲಿದ್ದಾರೆ.
ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಮುಗಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಜೈಸ್ವಲ್ ಬ್ಯಾಟ್ ಅಬ್ಬರಿಸಿತ್ತು. ಅದರಂತೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಭರ್ಜರಿ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಜೈಸ್ವಾಲ್ ತಂಡದೊಂದಿಗೆ ಭಾರತಕ್ಕೆ ವಾಪಸ್ಸಾಗಿದ್ದು ದೇಶೀಯ ಕ್ರಿಕೆಟ್‌ನತ್ತ ಗಮನಹರಿಸಲು ಮುಂದಾಗಿದ್ದಾರೆ. ಈ ನಡುವೆ ಜೈಸ್ವಾಲ್ ಮುಂಬೈ ತಂಡದಲ್ಲೇ ಮುಂದುವರೆಯಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ವಾಸ್ತವವಾಗಿ ವೃತ್ತಿಜೀವನದ ಆರಂಭದಿಂದ ಯಶಸ್ವಿ ಜೈಸ್ವಾಲ್ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುತ್ತಿದ್ದರು. ಬಹಳ ಸಮಯದಿಂದಲೂ ಜೈಸ್ವಾಲ್ ಮುಂಬೈ ತಂಡದ ಭಾಗವಾಗಿದ್ದರು. ಆದಾಗ್ಯೂ ಈ ವರ್ಷದ ಆರಂಭದಲ್ಲಿ ಜೈಸ್ವಾಲ್ ಗೋವಾ ಪರ ಆಡಲು ನಿರ್ಧರಿಸಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ಎನ್‌ಒಸಿ ಸಹ ಪಡೆದಿದ್ದರು. ಆ ಪ್ರಕಾರ ಜೈಸ್ವಾಲ್ ಮುಂಬರುವ ದೇಶೀ ಟೂರ್ನಿಯಲ್ಲಿ ಗೋವಾ ಪರ ಬ್ಯಾಟ್ ಹಿಡಿದು ಅಬ್ಬರಿಸಬೇಕಿತ್ತು. ಆದರೆ ರೋಹಿತ್ ಶರ್ಮಾ ಅವರ ಆಜ್ಞೆಯ ಮೇರೆಗೆ ಜೈಸ್ವಾಲ್ ತಮ್ಮ ನಿರ್ಧಾರದಿಂದ ಯು-ಟರ್ನ್ ತೆಗೆದುಕೊಂಡಿದ್ದು, ಮುಂಬೈನಲ್ಲೇ ಉಳಿಯಲು ನಿರ್ಧರಿಸಿದ್ದಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಜಿಂಕ್ಯ ನಾಯಕ್ ಬಹಿರಂಗಪಡಿಸಿದ್ದಾರೆ.
